ನಾಗ್ ಹಮ್ಮಡಿ -
ದಕ್ಷಿಣ ಈಜಿಪ್ಟಿನಲ್ಲಿ ನೈಲ್ ನದಿಯ ಪೂರ್ವದಂಡೆಯಲ್ಲಿರುವ ಲಕ್ಸಾರ್ ಪಟ್ಟಣದಿಂದ 96 ಕಿಮೀ. ದೂರದಲ್ಲಿರುವ ಒಂದು ಪಟ್ಟಣ. ಇದರ ಸಮೀಪದ ಒಂದು ಗೋರಿಯಲ್ಲಿ ಪ್ರಾಚೀನ ಕ್ರೈಸ್ತಧರ್ಮದ 40ಕ್ಕೂ ಹೆಚ್ಚು ಕೈಬರೆಹದ ಗ್ರಂಥಗಳನ್ನೊಳಗೊಂಡ ಕಟ್ಟುಗಳು ದೊರೆತಿವೆ (ಸು. 1945). ಇವುಗಳ ಕಾಲ 3-4ನೆಯ ಶತಮಾನ. ಕ್ರೈಸ್ತ ಧರ್ಮದ ಆರಂಭಕಾಲದಲ್ಲಿ ಪ್ರಚಾರದಲ್ಲಿದ್ದ ಆಧ್ಯಾತ್ಮರಹಸ್ಯವಾದಕ್ಕೆ (ಗ್ನಾಸ್ಟಿಸಿ¸óïಮ್) ಸಂಬಂಧಿಸಿದ ಸಾಹಿತ್ಯ ಇವುಗಳಲ್ಲಿವೆ. ಇವುಗಳ ಭಾಷೆ ಕಾಪ್ಟಿಕ್, ಗ್ನಾಸ್ಟಿಸಿ¸óïಮ್ ಪಂಥದ ಅನೇಕ ವಿವರಗಳನ್ನು ಈ ಹಸ್ತಪ್ರತಿಗಳು ನೀಡುತ್ತವೆ. ಏಸು ಕ್ರಿಸ್ತನ 114 ನುಡಿಗಳನ್ನೊಳಗೊಂಡಿರುವ ಥಾಮಸನ ಸುವಾರ್ತೆಗಳು ಎಂಬ ಬರೆಹ ಕುತೂಹಲಕಾರಿಯಾದದ್ದು. ಹೊಸ ಒಡಂಬಡಿಕೆಯಾಗಲಿ ಇತರ ಯಾವುದೇ ಪುರಾತನ ಕೃತಿಯಲ್ಲಾಗಲಿ ಇಲ್ಲದ, ಏಸು ಕ್ರಿಸ್ತನವೆನ್ನುವ ಕೆಲವು ಹೊಸ ನುಡಿಗಳನ್ನು ಇದು ಒಳಗೊಂಡಿರುವುದರಿಂದ ಈ ಗ್ರಂಥಕ್ಕೆ ಮನ್ನಣೆ ಬಂದಿದೆ.

	ಈ ಬರೆಹಗಳನ್ನು ಈ ಶತಮಾನದ ಅತ್ಯಂತ ಮಹತ್ತ್ವದ ಸಾಹಿತ್ಯಿಕ ಶೋಧ ಎಂದು ಪರಿಗಣಿಸಲಾಗಿದೆ.
(ಬಿ.ಎನ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ